ಫಣೇಶ್ವರನಾಥ್ ರೇಣು
4-3-1921, 11-4-1977. ಪ್ರೇಮಂಚಂದರ ಅನಂತರ ಗ್ರಾಮಜೀವನದ ಹಿನ್ನೆಲೆಯನ್ನು ತಮ್ಮ ಕಥಾಸಾಹಿತ್ಯಕ್ಕೆ ಸಶಕ್ತ ರೀತಿಯಲ್ಲಿ ದುಡಿಸಿಕೊಂಡ, ಹಿಂದಿಯ ಶ್ರೇಷ್ಠ ಕಾದಂಬರಿಕಾರರು. ಪ್ರೇಮಚಂದರಿಗಿಂತ ತೀರ ಭಿನ್ನವಾದ ರೀತಿಯಲ್ಲಿ ಗ್ರಾಮ ಜೀವನವನ್ನು ಚಿತ್ರಿಸಿ ಅಲ್ಲಿನ ಸಂಕೀರ್ಣತೆಗೆ, ವಿಪುಲತೆಗೆ ನಿರೂಪಣ ಶೈಲಿಗೆ, ಭಾಷೆಗೆ ವಿಶಿಷ್ಟ ಹಾಗೂ ಹೊಸ ಆಯಾಮವನ್ನು ತಂದು ಕೊಟ್ಟವರು. ಹುಟ್ಟಿದ್ದು ಬಿಹಾರಿನ ಪೂರ್ಣಿಮಾ ಜಿಲ್ಲೆಯ ಒಂದು ಚಿಕ್ಕಹಳ್ಳಿಯಾದ ಔರಾಹೋ-ಹಿಂಗನಾದಲ್ಲಿ. ಮಧ್ಯಮವರ್ಗದ ರೈತ ಕುಟುಂಬದಲ್ಲಿ. ಬಾಲ್ಯದ ವಿದ್ಯಾಭ್ಯಾಸ ವಿರಾಟ್‍ನಗರ (ನೇಪಾಲ) ಫಾರಬಿಸ್ ಗುಜ್‍ನಲ್ಲಿ ಹಾಗೂ ಉಚ್ಚ ಶಿಕ್ಷಣ ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ನಡೆದುವು.

1942ರಲ್ಲಿ ಓದು ನಿಲ್ಲಿಸಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಾಗೂ ನೇಪಾಲದ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಆ ಕಾರಣದಿಂದಾಗಿ ಮೂರು ವರ್ಷ ಸ್ಥಾನಬದ್ಧತೆಯಲ್ಲಿದ್ದು ಜೈಲುವಾಸವನ್ನನುಭವಿಸಬೇಕಾಯಿತು. ಸಾಕಷ್ಟು ವರ್ಷಗಳ ಕಾಲ ಸೋಷಲಿಸ್ಟ್ ಪಾರ್ಟಿಯ ಸಕ್ರಿಯ ಸದಸ್ಯರಾಗಿದ್ದುಕೊಂಡು ರೈತ ಆಂದೋಲನಗಳಲ್ಲಿ ಹಾಗೂ ನೇಪಾಲದಲ್ಲಿ ಕಾರ್ಮಿಕ ಸಂಘರ್ಷದ ಪ್ರಚಾರಕಾರ್ಯದಲ್ಲಿ ಆಸಕ್ತಿ ತೋರಿದರು. ಹೀಗಾಗಿ ಇವರ ಬದುಕು ಮತ್ತು ಸಾಹಿತ್ಯದಲ್ಲಿ ನೇಪಾಲದ ಬಗೆಗೆ ಕಂಡುಬರುವ ಆತ್ಮೀಯತೆಯೆ ಹೆಚ್ಚು ಪ್ರಖರ. ನೇಪಾಲದಲ್ಲಿನ ಅಧಿಕಾರಿಶಾಹಿ ಆಳ್ವಿಕೆಯನ್ನು ಕೊನೆಗೊಳಿಸಲು ಕೊಯಿರಾಲಾ ಬಂಧುಗಳೊಡನೆ ನೇಪಾಲದ ರಾಜಕೀಯ ರಂಗವನ್ನು ಪ್ರವೇಶಿಸಿದ ರೇಣು ಕ್ರಾಂತಿಕಾರಿಗಳ ಗುಂಪು ಸೇರಿದ್ದಲ್ಲದೆ, ಕ್ರಾಂತಿಕಾರಿಗಳಿಂದ ನಡೆಸಲ್ಪಡುತ್ತಿದ್ದ ನೇಪಾಲಿ ರೇಡಿಯೋದ ಪ್ರಥಮ ಡೈರೆಕ್ಟರ್ ಜನರಲ್ ಆದರು. ಹೀಗಾಗಿ ನೇಪಾಲದ ಸ್ವಾತಂತ್ರ್ಯಕ್ಕಾಗಿ ನಡೆಸಿದ ಸಂಘರ್ಷ ಇವರ ಸಾಹಿತ್ಯದಷ್ಟೇ ಅವಿಸ್ಮರಣಿಯ. ಕಮಲೇಶ್ವರ್ ಹೇಳುವಂತೆ ನೇಪಾಲದ ಸ್ವಾತಂತ್ರ್ಯಕ್ಕಾಗಿ ರೇಣು ತಮ್ಮ ಯೌವನವನ್ನೇ ಧಾರೆಯೆರೆದು, ದುಡಿದು ದಣಿದರು.
1952-72ರ ವರೆಗೆ ರಾಜಕೀಯದಿಂದ ದೂರ ಸರಿದಿದ್ದು ಸಾಹಿತ್ಯ ಸೃಷ್ಟಿಮಾಡಿದರು. 1972ರಲ್ಲಿ ವಿಧಾನಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಇದಕ್ಕೆ ಪ್ರೇರಣೆ ಜಯಪ್ರಕಾಶರದ್ದು. ಆದರೆ ಚುನಾವಣೆಯಲ್ಲಿ ಪರಾಜಿತರಾದರು.

ಇವರ ಕ್ರಾಂತಿಕಾರಿಜೀವನದ ಚರಮಬಿಂದು ಜಯಪ್ರಕಾಶರ ನೇತೃತ್ವದಲ್ಲಿ ಬಿಹಾರಿನಲ್ಲಾದ ಜನಕ್ರಾಂತಿ. ಅದಕ್ಕೆ ಜೆ. ಪಿ. ಮಾರ್ಗದರ್ಶಿಗಳು. ಇವರು ನೇತಾರರು. ಪರಿಣಾಮವಾಗಿ ಜೈಲಿನ ನರಕಯಾತನೆಯನ್ನು ಅನುಭವಿಸಿದರು.
ನಲವತ್ತರ ದಶಕದಲ್ಲಿ ಬರವಣಿಗೆಯನ್ನಾರಂಭಿಸಿದ ಇವರ ಮೊದಲ ಕತೆ ಬಟ್ ಬಾಬಾ 1946ರಲ್ಲಿ ಕಲ್ಕತ್ತೆಯ ಸಾಪ್ತಾಹಿಕ ವಿಶ್ವಮಿತ್ರದಲ್ಲಿ ಪ್ರಕಟವಾಯಿತು. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ಹಿಂದೀ ಕಾದಂಬರಿ ಕ್ಷೇತ್ರದಲ್ಲಿ ಇವರ ಪ್ರಸಿದ್ಧ ಹಾಗೂ ಬಹುಚರ್ಚಿತ ಕಾದಂಬರಿ ಮೈಲಾ ಆಂಚಲ್ (1954). ಈ ಕಾದಂಬರಿ ಅವರನ್ನು ಶ್ರೇಷ್ಠರ ಪಂಕ್ತಿಗೆ ಸೇರಿಸಿತು. ಹಿಂದಿಯಲ್ಲಿ ಆಂಚಲಿಕ ಕಾದಂಬರಿ (ಪ್ರಾದೇಶಿಕ ಕಾದಂಬರಿ) ಪ್ರಕಾರ ಒಂದು ನಿಶ್ಚಿತ ನೆಲಗಟ್ಟನ್ನು ಪಡೆದುಕೊಂಡದ್ದು ಈ ಕಾದಂಬರಿ ಪ್ರಕಟವಾದ ಮೇಲೆಯೆ. ಹಿಂದಿಯಲ್ಲಿ ಈ ಮುಂಚೆಯೂ ಗ್ರಾಮೀಣ ಬದುಕಿನ ವಾಸ್ತವಿಕತೆಯ ಹಲವು ಮುಖಗಳು ಚಿತ್ರಣವನ್ನು ನೀಡುವ ಕಾದಂಬರಿಗಳಿದ್ದುವಾದರೂ ಮೈಲಾ ಆಂಚಲ್‍ನ ಸಮಗ್ರತೆಯಾಗಲಿ, ಸಾಮಾಜಿಕ ಕಳಕಳಿಯಾಗಲಿ, ಮೌಲ್ಯಗಳ ಘರ್ಷಣೆಯಾಗಲಿ-ಈ, ಮಟ್ಟದಲ್ಲಿ ಅವುಗಳಲ್ಲಿ ಕಾಣವು. ಇದರಲ್ಲಿ ಬರುವ ಬಿಹಾರದ ಪೂರ್ಣಿಯಾ ಜಿಲ್ಲೆಯ ಮೇರಿಗಂಜ್ ಎಂಬ ಹಳ್ಳಿ ಭಾರತದ ಹಳ್ಳಿಗಳ ಪ್ರತಿನಿಧಿ. ಗ್ರಾಮೀಣ ಬದುಕಿನ ಯಥಾರ್ಥವನ್ನು, ಒಳಿತು-ಕೆಡುಕುಗಳನ್ನು ಮನೋಜ್ಞವಾಗಿ ಇದರಲ್ಲಿ ಚಿತ್ರಿಸಲಾಗಿದೆ.

ಪರತೀ ಪರಿಕಥಾ (1967), ದೀರ್ಘತಪಾ (1961), ಜುಲೂಸ್, ಕಿತನೇ ಚೌರಾಹೆ-ಇವು ಇವರ ಇತರೆ ಕಾದಂಬರಿಗಳು. ಈ ಕಾದಂಬರಿಗಳಲ್ಲೂ ಕೃತಿಕಾರನ ಸಾಮಾಜಿಕ ಪ್ರಜ್ಞೆ ಮತ್ತಷ್ಟು ವಿಕಾಸಗೊಂಡಿರುವುದನ್ನು ಕಾಣಬಹುದಾಗಿದೆ. ಭೂ ಸಮಸ್ಯೆ, ನಾರೀಜೀವನದ ನೂರು ಸಮಸ್ಯೆಗಳು, ಬದಲಾಗುತ್ತಿರುವ ಮೌಲ್ಯಗಳ ಘರ್ಷಣೆ, ರಾಜಕೀಯ-ಸಾಮಾಜಿಕ ಸಮಸ್ಯೆಗಳನ್ನು ರಮ್ಯವಾಗಿ ವರ್ಣಿಸುವ ಈ ಕಾದಂಬರಿಗಳು ಓದುಗರ ಅಪಾರ ಮನ್ನಣೆಗೆ ಪಾತ್ರವಾಗಿವೆ.

ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಭಾರತದ ಎಲ್ಲ ಸ್ಥಿತ್ಯಂತರಗಳ ನಿಕಟ ಚಿತ್ರವನ್ನು ಇವರು ತಮ್ಮ ಕಾದಂಬರಿಗಳ ವಿಶಾಲ ಹಂದರದಲ್ಲಿ ನಿರೂಪಿಸಿದ್ದಾರೆ.
ಇವರ ಮೊದಲ ಕಥಾ ಸಂಕಲನ ಠುಮರಿ (1959). ಇಲ್ಲಿನ ಬಹಳಷ್ಟು ಕತೆಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ. ಈ ಸಂಗ್ರಹದಲ್ಲಿನ ತೀಸ್ರೀಕಸಮ್ ರಸಮ್ ಉರ್ಫ್ ಮಾರೇ ಗಯೇ ಗುಲ್‍ಫಾಮ್ ಎಂಬ ಕತೆಯನ್ನಾಧರಿಸಿ ಹಿಂದಿಯಲ್ಲಿ ತಯಾರಾದ ಚಲನಚಿತ್ರಕ್ಕೆ ರಾಷ್ಟ್ರಪತಿಯ ಸ್ವರ್ಣಪದಕವೂ ಲಭ್ಯವಾಗಿದೆ. ಆದಿಮ್ ರಾತ್ರೀ ಕೀ ಮಹತ್ ಹಾಫ್ ಕಜಪ್, ಅಗಿನ್ ಬೋರ್-ಇವು ಇವರ ಇತರ ಕಥಾಸಂಗ್ರಹಗಳು. ಈ ಕಥೆಗಳಿಗೂ ವಸ್ತು ಕವಿ ಕಂಡ ಉಂಡ ಗ್ರಾಮಜೀವನವೇ.

ರೇಣು ಕತೆ ಕಾದಂಬರಿಗಳನ್ನಷ್ಟೆ ಅಲ್ಲವೆ ಕಾವ್ಯವೂ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೆಲಸಮಾಡಿದ್ದಾರೆ.
ಮೈಲಾ ಆಂಚಲ್ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆಯಿತು. ಕೃತಿಕಾರನಿಗೆ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಬಂತು. ಆದರೆ ಇವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅದನ್ನು ಹಿಂತಿರುಗಿಸಿದರು. ಬಹಳ ಕಡಿಮೆ ಬರೆದು ಜನಪ್ರಿಯತೆಯ ಉನ್ನತ ಶಿಖರವನ್ನು ಏರಿದ್ದ ರೇಣು ಏಪ್ರಿಲ್ 11, 1977 ರಂದು ನಿಧನರಾದರು.				(ಟಿ.ಎಚ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ